ಚೆಮ್ಸ್‍ಫರ್ಡ್ - ಫ್ರೆಡ್ರಿಕ್ ಜಾನ್ ನೇಪಿಯರ್ ತೆಸಿಜರ್
1868-1933. ಬ್ರಿಟಿಷ್ ರಾಜಕಾರಣಿ. ಪ್ರಥಮ ವಿಸ್ಕೌಂಟ್. ಭಾರತದ ವೈಸ್‍ರಾಯಿ (1916-1921). ಎರಡನೆಯ ಬ್ಯಾರನ್ ಚೆಮ್ಸ್‍ಫರ್ಡನ ಹಿರಿಯ ಮಗ. 1868ರ ಆಗಸ್ಟ್ 12ರಂದು ಲಂಡನಿನಲ್ಲಿ ಜನಿಸಿದ. ವಿಂಚೆಸ್ಟರಿನಲ್ಲೂ ಆಕ್ಸ್‍ಫರ್ಡಿನ ಮ್ಯಾಗ್ಡಲೀನ್ ಕಾಲೇಜಿನಲ್ಲೂ ವಿದ್ಯಾಭ್ಯಾಸ ಮಾಡಿ 1893ರಲ್ಲಿ ನ್ಯಾಯವಾದಿಯಾದ. 1900ರಿಂದ 1904ರವರೆಗೆ ಲಂಡನ್ ಶಾಲಾ ಮಂಡಲಿಯ ಸದಸ್ಯನಾಗಿದ್ದ. 1904-05ರಲ್ಲಿ ಲಂಡನ್ ಕೌಂಟಿ ಕೌನ್ಸಿಲಿನಲ್ಲಿದ್ದ. ಈ ಬ್ಯಾರನ್ ಚೆಮ್ಸ್‍ಫರ್ಡ್ ಆಗಿ ತಂದೆಯ ಉತ್ತರಾಧಿಯಾದ್ದು 1905ರಲ್ಲಿ. 1905-09ರಲ್ಲಿ ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡಿನಲ್ಲೂ 1909-13ರಲ್ಲಿ ನ್ಯೂ ಸೌತ್‍ವೇಲ್ಸಿನಲ್ಲೂ ರಾಜ್ಯಪಾಲನಾಗಿದ್ದ. 1912ರಲ್ಲಿ ಇವನಿಗೆ ನೈಟ್ ಪದವಿ ಲಭಿಸಿತು. 1913ರಲ್ಲಿ ಈತ ಆಸ್ಟ್ರೇಲಿಯವನ್ನು ಬಿಟ್ಟು. ಒಂದನೆಯ ಮಹಾಯುದ್ಧದ ಆರಂಭದ ಕಾಲದಲ್ಲಿ ಡಾರ್ಸೆಟ್ ರೆಜಿಮೆಂಟಿನಲ್ಲಿ ಭಾರತದಲ್ಲಿದ್ದ.

ಲಾರ್ಡ್ ಚೆಮ್ಸ್‍ಫರ್ಡ್ 1916-1921ರಲ್ಲಿ ಭಾರತದ ಗವರ್ನರ್-ಜನರಲ್ ಹಾಗೂ ವೈಸ್‍ರಾಯಿಯಾಗಿದ್ದ. ತತ್ಕಾಲದ ಭಾರತದ ರಾಜಕೀಯದಲ್ಲಿ ಇವನ ಪಾತ್ರ ಬಹು ನಿಷ್ಕ್ರಿಯವಾದ್ದೆಂದು ಹೇಳಬಹುದು. ಭಾರತದಲ್ಲಿ ಇವನ ಆಡಳಿತ ಆರಂಭವಾದ್ದು ಮೆಸಪೋಟೇಮಿಯದಲ್ಲಿ ಬ್ರಿಟಿಷ್ ಸೈನ್ಯ ಪರಾಜಯಗೊಂಡ ಕಾಲದಲ್ಲಿ. ಒಂದನೆಯ ಮಹಾಯುದ್ಧದ ಆರಂಭದಿಂದಲೂ ಭಾರತ ಸ್ವಪ್ರೇರಣೆಯಿಂದ ತೋರಿದ ನಿಷ್ಠೆ ಪರಾಕ್ರಮಗಳಿಗೆ ಬ್ರಿಟನ್ ಯಾವುದೇ ಬಗೆಯ ಪ್ರೋತ್ಸಾಹದಾಯಕ ಸ್ಪಷ್ಟ ಪ್ರತಿಕ್ರಿಯೆಯನ್ನು ತೋರಿಸದಿದ್ದದ್ದು ಭಾರತಕ್ಕೆ ಅತೃಪ್ತಿಯನ್ನುಂಟು ಮಾಡಿತ್ತು. ಭಾರತದಲ್ಲಿ ಕ್ರಮಕ್ರಮವಾಗಿ ಜವಾಬ್ದಾರಿ ಸರ್ಕಾರವನ್ನು ಸ್ಥಾಪಿಸುವುದೇ ಬ್ರಿಟಿಷ್ ಸರ್ಕಾರದ ಗುರಿ ಎಂದು ಭಾರತದ ಸ್ಟೇಟ್ ಸೆಕ್ರೆಟರಿ ಎಡ್ವಿನ್ ಮಾಂಟೆಗ್ಯೂ 1917ರ ಆಗಸ್ಟ್ 30ರಂದು ಲಂಡನ್ನಿನ ಕಾಮನ್ಸ್ ಸಭೆಯಲ್ಲಿ ಹೇಳಿಕೆ ನೀಡಲು ಕಾರಣವಾದ ಬ್ರಿಟಿಷ್ ನೀತಿಯನ್ನು ರೂಪಿಸುವಲ್ಲಿ ಚೆಮ್ಸ್‍ಫರ್ಡನ ಪಾತ್ರವೇನೂ ಇರಲಿಲ್ಲ. 1917ರಲ್ಲಿ ಮಾಂಟೆಗ್ಯೂ ಭಾರತಕ್ಕೆ ಬಂದಾಗ ಚೆಮ್ಸ್‍ಫರ್ಡ್‍ನೂ ಅವನ ಜೊತೆಯಲ್ಲಿ ಪ್ರವಾಸ ಮಾಡಿದ. ಭಾತದ ಸಂವಿಧಾನಾತ್ಮಕ ಸುಧಾರಣೆಗಳನ್ನು ಕುರಿತು 1918ರಲ್ಲಿ ನೀಡಲಾದ ವರದಿಯ ನಿಜವಾದ ಕರ್ತೃವಾದ ಮಾಟೆಗ್ಯೂನ ಹೆಸರಿನೊಂದಿಗೆ ಇವನ ಹೆಸರೂ ಸೇರಿಕೊಂಡಿದೆ. ಮಾಂಟೆಗ್ಯೂ-ಚೆಮ್ಸ್‍ಫಡ್ ವರದಿಯ ಆಧಾರದ ಮೇಲೆ ರೂಪಿತವಾದ 1919ರ ಭಾರತ ಸರ್ಕಾರ ಅಧಿನಿಯಮವನ್ನು ರಚಿಸುವಲ್ಲೂ ಚೆಮ್ಸ್‍ಫರ್ಡನ ಪಾತ್ರವೇನೂ ಇರಲಿಲ್ಲ. ಭಾರತದ ಪರಿಸ್ಥಿತಿಯನ್ನು ಚೆಮ್ಸ್‍ಫರ್ಡ್ ಸರಿಯಾಗಿ ನಿರ್ವಹಿಸಲಾರದಾದ. ರೌಲಟ್ ಸಮಿತಿಯ ಸಲಹೆಗಳಿಗೆ ಅನುಗುಣವಾಗಿ ಲಾರ್ಡ್ ಚೆಮ್ಸ್‍ಫರ್ಡ್ 1919ರಲ್ಲಿ ಜಾರಿಗೆ ತಂದ ಕಾನೂನುಗಳು ತುಂಬ ಉಗ್ರವಾಗಿದ್ದುವು. ಈ ಕಾನೂನುಗಳ ಮೂಲಕ ನ್ಯಾಯಾಧೀಶರಿಗೆ ನ್ಯಾಯದರ್ಶಿಗಳ ನೆರವಿಲ್ಲದೆಯೇ ರಾಜಕೀಯ ಮೊಕದ್ದಮೆಗಳ ವಿಚಾರಣೆ ನಡೆಸುವ ಅಧಿಕಾರ ನೀಡಲಾಯಿತು. ರಾಜಕೀಯ ಕಾರಣಗಳಿಗಾಗಿ ಯಾರನ್ನಾದರೂ ವಿಚಾರಣೆಯಿಲ್ಲದೆ ಬಂಧಿಸಿಡುವ ವ್ಯಾಪಕ ಅಧಿಕಾರ ಪ್ರಾಂತ್ಯ ಸರ್ಕಾರಗಳಿಗೆ ಪ್ರಾಪ್ತವಾಯಿತು. ಸಾಮ್ರಾಜ್ಯ ವಿಧಾನ ಪರಿಷತ್ತಿನ ಎಲ್ಲ ಖಾಸಗಿ ಸದಸ್ಯರೂ ವಿರುದ್ಧವಾಗಿದ್ದಾಗ್ಯೂ ಈ ಅಧಿನಿಯಮಗಳು ಅನುಮೋದಿತವಾದವು. ಇದು ಸಾರ್ವತ್ರಿಕ ಅಸಮಾಧಾನಕ್ಕೆ ಕಾರಣವಾಯಿತು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನಾ ಸಭೆಗಳು ನಡೆದವು. ಹರತಾಳಗಳಾದವು. ಇಂಥ ಸಭೆಗಳಲ್ಲೊಂದು ಅಮೃತಸರದ ಜಲಿಯನ್ ವಾಲಾಬಾಗಿನಲ್ಲಿ ನಡೆಯುವುದಿತ್ತು. ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಸೇರಿದ್ದ ಈ ಸಭೆಯನ್ನು ಚದುರಿಸಲು ಜನರಲ್ ಡೈಯರನ ಸೇನೆಗುಂಡು ಹಾರಿಸಿತು. ಆ ಸಭೆಯಿಂದ ಹೊರಕ್ಕೆ ಹೋಗಲು ಇದ್ದ ಒಂದೇ ದಾರಿಯನ್ನು ಪ್ರತಿಬಂಧಿಸಿ ನಿರಸ್ತರೂ ಅಸಹಾಯಕರು ಆದ ಜನರ ಮೇಲೆ ಡೈಯರನ ಸೇನೆ ನಡೆಸಿದ ಅತ್ಯಾಚಾರ ಭೀಕರವಾದ್ದು. ಗಂಡಸರೂ ಹೆಂಗಸರೂ ಮಕ್ಕಳೂ ನೂರಾರು ಜನ ಮಡಿದರು. ಕಾನೂನನ್ನು ಉಲ್ಲಂಘಿಸಿದವರಿಗೆ ಉಗ್ರ ದಂಡನೆ ವಿಧಿಸಲಾಯಿತು. ವೈಸ್‍ರಾಯ್ ಲಾರ್ಡ್ ಚೆಮ್ಸಫರ್ಡ್‍ನಿಗೆ ಈ ಕೃತ್ಯಗಳೆಲ್ಲ ಗೊತ್ತಿದ್ದರೂ ಇವನ್ನು ನಿಲ್ಲಿಸಲು ಅವನು ಏನೂ ಕ್ರಮಕೈಗೊಳ್ಳಲಿಲ್ಲ. ಜನಾಭಿಪ್ರಾಯವನ್ನು ಲೆಕ್ಕಿಸಲಿಲ್ಲ. ಕೊನೆಗೆ ಇಷ್ಟವಿಲ್ಲದೆ ಅವನು ಈ ಘಟನೆಗಳ ವಿಚಾರಣೆಗಾಗಿ ಹಂಟರ್ ಸಮಿತಿಯನ್ನು ನೇಮಿಸಿದ. ಈ ಸಮಿತಿ ವಿಚಾರಣೆಯನ್ನಾರಂಭಿಸುವ ಮೊದಲೇ ಅವನು ಅಪಕೃತ್ಯಗಳಲ್ಲಿ ತೊಡಗಿದ್ದ ಎಲ್ಲ ಮಿಲಿಟರಿ ಮತ್ತು ಸಿವಿಲ್ ಅಧಿಕಾರಿಗಳಿಗೂ ರಕ್ಷಣೆ ನೀಡುವ ಅಧಿನಿಯಮವೊಂದನ್ನು ಜಾರಿಗೆ ತಂದ. ವಿಚಾರಣಾ ಸಮಿತಿ ಜನರಲ್ ಡೈಯರನನ್ನು ಖಂಡಿಸಿತಲ್ಲದೆ, ಲಷ್ಕರಿ ಕಾನೂನಿನ ಆಡಳಿತವನ್ನು ಟೀಕಿಸಿತು. ಈ ವರದಿಯಂತೆ ಲಾರ್ಡ್ ಚೆಮ್ಸ್‍ಫರ್ಡ್ ಸೂಕ್ತ ಕ್ರಮ ಕೈಗೊಳ್ಳದೆ ಹೋದ. ಭಾರತ-ಬ್ರಿಟನ್ ಸೌಹಾರ್ದಕ್ಕೆ ಇದರಿಂದ ಭಾರಿ ಪೆಟ್ಟು ಬಿತ್ತು. 1857ರ ಬಂಡಾಯದ ಅನಂತರದ ಬೇರೆ ಯಾವ ಘಟನೆಯೂ ಭಾರತದ ಜನರ ಮನಸ್ಸಿನ ಮೇಲೆ ಇದರಷ್ಟು ತೀವ್ರ ಪರಿಣಾಮವನ್ನುಂಟುಮಾಡಲಿಲ್ಲ. ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಪ್ರಭಾವದಿಂದಾಗಿ ಇವನ ಆಡಳಿತದ ವಿರುದ್ಧ ಭಾರತದಲ್ಲಿ ಕ್ರಾಂತಿ ಆಗಲಿಲ್ಲವೆನ್ನಬಹುದು.

	1921ರಲ್ಲಿ ನಿವೃತ್ತನಾದ ಮೇಲೆ ಚೆಮ್ಸ್‍ಫರ್ಡ್ ವೈಕೌಂಟ್ ಆದ. 1924ರಲ್ಲಿ ರಾಮ್ಸೇ ಮ್ಯಾಕ್ಡೊನಾಲ್ಡನ ಲೇಬರ್ ಸರ್ಕಾರದಲ್ಲಿ ಆಡ್ಮಿರಾಲ್ಮಿಯ ಪ್ರಥಮ ಲಾರ್ಡ್ ಆಗಿದ್ದ. ಲಾರ್ಡ್ ಚೆಮ್ಸ್‍ಫರ್ಡ್ ತೀರಿಕೊಂಡದ್ದು 1933ರ ಏಪ್ರಿಲ್ 1ರಂದು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ